ಬೇರ್ ಕಾರ್ಲ್ ಅರ್ನ್‍ಸ್ಟ್ ಫನ್
(1792-1876). ಜೀವವಿಜ್ಞಾನಿ. ಎಸ್ಟೋನೀಯದ ಪೀಪ್ ಎಂಬಲ್ಲಿ 1792 ಫೆಬ್ರುವರಿ 28 ರಂದು ಜನಿಸಿದ.  ಮೂರು ವರ್ಷಗಳ ಖಾಸಗೀ ಶಿಕ್ಷಣದ ಅನಂತರ ಗಣ್ಯವ್ಯಕ್ತಿಗಳ ಮಕ್ಕಳಿಗೆ ಮೀಸಲಾಗಿದ್ದ ಶಾಲೆಯೊಂದರಲ್ಲಿ ವೈದ್ಯಕೀಯ ವಿಜ್ಞಾನದ ವಿದ್ಯಾರ್ಥಿಯಾಗಿ ಸೇರಿ 1814ರಲ್ಲಿ ಎಂ.ಡಿ. ಪದವಿ ಪಡೆದ.  ಅಲ್ಲಿಯ ವೈದ್ಯಕೀಯ ತರಬೇತಿ ಅವನಿಗೆ ಅತೃಪ್ತಿ ತಂದುದರಿಂದ 1814 ರಿಂದ 1815ರ ತನಕ ಬರ್ಲಿನ್ ಮತ್ತು ವಿಯೆನ್ನಾದಲ್ಲಿ ಶಿಕ್ಷಣ ಮುಂದುವರಿಸಿದ.  1815-16ರ ವಿದ್ಯಾಭ್ಯಾಸದ ಅವಧಿ ಈತನ ಜೀವನದಲ್ಲಿ ಬಹಳ ಮುಖ್ಯವಾದ್ದು.  ಆಗ ಈತ ವುಟ್ರ್ಸ್‍ಬರ್ಗ್ ವಿಶ್ವವಿದ್ಯಾಲಯದಲ್ಲಿ ಭ್ರೂಣ ವಿಜ್ಞಾನದಲ್ಲಿ ವಿಶೇಷ ಪರಿಣತಿ ಪಡೆದಿದ್ದ ಇಗ್‍ನಜ್ ಡೊಲಿಂಗರ್ ಎಂಬಾತನ ಮಾರ್ಗದರ್ಶನದಲ್ಲಿ ತುಲನಾತ್ಮಕ ಭ್ರೂಣವಿಜ್ಞಾನವನ್ನು ಅಧ್ಯಯನ ಮಾಡಿದ.  ಕೋನಿಗ್ಸ್‍ಬರ್ಗ್‍ನಲ್ಲಿ ಪ್ರಾಧ್ಯಾಪಕನಾಗಿದ್ದ ಬರ್ಡಾಕ್‍ನ ಆಹ್ವಾನದ ಮೇರೆಗೆ ಶವವಿಚ್ಛೇದಕ ಹುದ್ದೆ ನಿರ್ವಹಿಸಲು 1817ರಲ್ಲಿ ಅಲ್ಲಿಗೆ ಹೋದ.  1819ರ ವೇಳೆಗೆ ಅಂಗರಚನಾ ವಿಜ್ಞಾನದಲ್ಲಿ ಪರಿಣತನಾದ.

	1819ರಿಂದ 1834ರ ತನಕ ಭ್ರೂಣವಿಜ್ಞಾನಕ್ಕೆ ಸಂಬಂಧಿಸಿದ ಅನೇಕ ಸಂಶೋಧನೆ ನಡೆಸಿ ಸಫಲನಾದ.  ಕಶೇರುಕಗಳಲ್ಲಿ ಪ್ರಾಥಮಿಕ ಜರಾಯು ಪದರಗಳ ಉದ್ಬವ ಕುರಿತು ಸುದೀರ್ಘವಾಗಿ ವಿವರಿಸಿದ.  ಪ್ರಾಣಿಗಳ ಬೆಳೆವಣಿಗೆ ಸರಳತೆಯಿಂದ ಸಂಕೀರ್ಣತೆ ಕಡೆ ಸಾಗಿ, ಬೆಳೆವಣಿಗೆಯ ವಿವಿಧ ಹಂತಗಳು ಆ ಜೀವಿಯ ಪ್ರಾಗೈತಿಹಾಸವನ್ನು ಪ್ರತಿಬಿಂಬಿಸುತ್ತದೆ ಎಂಬ ಸಿದ್ಧಾಂತವನ್ನು ಪ್ರತಿಪಾದಿಸಿದ.  ಸ್ತನಿಗಳ ಬಗ್ಗೆ ಈತನ ಮಾಡಿದ ಅಧ್ಯಯನಗಳಿಂದ, ಪ್ರತಿ ಪ್ರಭೇದದ ಪ್ರಾಣಿಯೂ ಮೊಟ್ಟೆಯಿಂದ ತನ್ನ ಜೀವನ ಪ್ರಾರಂಭಿಸಿ ವಿವಿಧ ಅಂಗಾಂಶಗಳಾಗಿ ವಿಭೇದನೆ ಹೊಂದಿ, ಇವು ಅಂಗಾಂಗಗಳಾಗಿ ಪರಿವರ್ತನೆಗೊಂಡು ಪ್ರಬುದ್ಧ ಜೀವಿ ಉದ್ಭವಿಸುತ್ತದೆ ಎಂಬ ವಿಚಾರ ತಿಳಿದುಬಂತು.  ಭ್ರೂಣ ವಿಜ್ಞಾನವನ್ನು ವ್ಯವಸ್ಥಿತವಾಗಿ ಅಧ್ಯಯನ ಮಾಡಲು ಸಾಧ್ಯವಾಗುವಂತೆ ತುಲನಾತ್ಮಕ ಅಂಗರಚನಾ ವಿಜ್ಞಾನವನ್ನು ಅದರೊಂದಿಗೆ ಸೇರಿಸಿದ.  1827ರಲ್ಲಿ ಈತನ 'ಡೀ ಓವಿ ಮ್ಯಾಮೇಲಿಯಮ್ ಎಟ್ ಹೋಮಿನಿಸ್ ಜೆನಿಸಿ ಎಪಿಸ್ಟೋ¯ ' ಎಂಬ ಪುಸ್ತಕ ಪ್ರಕಟವಾಯಿತು. ಮಾನವನನ್ನೂ ಒಳಗೊಂಡಂತೆ ಸ್ತನಿಗಳಲ್ಲಿ ಬೆಳೆವಣಿಗೆ ಮೊಟ್ಟೆಯಿಂದ ಪ್ರಾರಂಭವಾಗುತ್ತದೆ ಎಂಬ ವಿಚಾರವನ್ನು ಇದರಲ್ಲಿ ವ್ಯಕ್ತಪಡಿಸಿದ್ದಾನೆ.  ಅಲ್ಲದೆ ಒಂದು ಪ್ರಭೇದದ ಭ್ರೂಣ ಅದರ ಬೆಳೆವಣಿಗೆಗೆ ವಿವಿಧ ಹಂತಗಳಲ್ಲಿ ಇತರ ಪ್ರಭೇದಗಳ ಭ್ರೂಣವನ್ನು ಹೋಲುತ್ತದೆ ಎಂದೂ ವಾದಿಸಿದ್ದಾನೆ.  ಈ ವಾದದೊಡನೆ ಜೀವ ವಿಜ್ಞಾನದ ಪ್ರಮುಖ ಸಿದ್ಧಾಂತವಾದ ಎಪಿಜೆನಿಟಿಕ್ ನಿಯಮ ಪ್ರತಿಪಾದಿತವಾಯಿತು.  ಈತನ ಮತ್ತೊಂದು ಕೃತಿ 'ವ್ಯೂಬೆರ್ ಡೀ ಎಂಟ್‍ವಿಕ್ಲುಂಗ್ಸ್ ಗೆಶ್ಟಿಸ್ಟೆ ಡೆರ್ ಟೀಯೆರಿ ಬಿಯೊಬಾಖ್ಟುಂಗ್ ಉಂಟ್ ರಿಫ್ಲೆಕ್ಸಿಯೋನ್ ಎಂಬುದು 1837ರಲ್ಲಿ ಎರಡು ಸಂಪುಟಗಳಲ್ಲಿ ಪ್ರಕಟವಾಯಿತು.  ಅವುಗಳಲ್ಲಿ ಕಶೇರುಕಗಳ ಬೆಳೆವಣಿಗೆಯ ಎಲ್ಲ ಹಂತಗಳನ್ನು ಕುರಿತು ವಿವರಿಸಿ ವಿಶ್ಲೇಷಿಸಿದ್ದಾನೆ.  ನರಮಂಡಲದ ಪೂರ್ವಭಾವಿ ಅಂಗಗಳಾದ ನರ ಪದರ, ಮಿದುಳು ಕೋಶಿಕೆ, ನೋಟೊಕಾರ್ಡ್‍ಗಳನ್ನು ಗುರುತಿಸಿದವರಲ್ಲಿ ಈತನೇ ಮೊದಲಿಗ.  ಕಶೇರುಕಗಳಲ್ಲಿ ಜರಾಯು ಪದರಗಳ ಪ್ರಾಮುಖ್ಯವನ್ನೂ ವಿವರಿಸಿದ್ದಾನೆ.

	1834ರಲ್ಲಿ ಕೊನಿಗ್ಸ್‍ಬರ್ಗ್‍ನ್ನು ಬಿಟ್ಟು ರಷ್ಯಾದ ಪೀಟರ್ಸ್‍ಬರ್ಗ್‍ಗೆ ಹೋಗಿ ಅಲ್ಲಿಯ ವಿಜ್ಞಾನ ಅಕಾಡೆಮಿಯ ಸದಸ್ಯನಾದ.  ಮೊದಲು ಅಲ್ಲಿಯ ಪುಸ್ತಕ ಭಂಡಾರದಲ್ಲಿ ಗ್ರಂಥಪಾಲಕನಾಗಿ ಸೇರಿ ಮುಂದೆ ಅದರ ಆಡಳಿತ ವರ್ಗದ ವಿವಿಧ ಹುದ್ದೆಗಳನ್ನು ನಿರ್ವಹಿಸಿದ.  ರಷ್ಯಾಕ್ಕೆ ಹೋದ ಅನಂತರ ಭ್ರೂಣ ವಿಜ್ಞಾನದ ಸಂಶೋಧನೆಗಳನ್ನು ಬಿಟ್ಟು ಉತ್ತರ ರಷ್ಯಾದ ಜೀವಿಗಳ ಸಂಗ್ರಹಣೆಯಲ್ಲಿ ತೊಡಗಿಸಿದ.  ಜೊತೆಗೆ ಮೀನುಗಾರಿಕೆಯಲ್ಲಿ ಕೂಡ ಆಸಕ್ತಿ ಹೊಂದಿದ್ದ ಪ್ರಾಣಿಗಳ ಸಂಗ್ರಹಕ್ಕೆಂದು ಅಲೆದಾಡುತ್ತಿದ್ದಾಗ ರಷ್ಯಾದ ಭೂಭಾಗಗಳ ರಚನೆಯ ಅಧ್ಯಯನದಲ್ಲೂ ಆಸಕ್ತಿ ವಹಿಸಿದ.  ರಷ್ಯದ ನದಿಗಳ ದಂಡೆಯ ಮಾದರಿಗಳನ್ನು ಅಧ್ಯಯನಮಾಡಿ ವಿವರಿಸಿದ್ದಾನೆ.  ಈತನ ಸಂಗ್ರಹಗಳಲ್ಲಿ ರಷ್ಯಾದ ಪ್ರಾಣಿಗಳ ತಲೆಬುರುಡೆಯ ಸಂಗ್ರಹ ಅಸಾಧಾರಣವಾದುದು.  1859ರಲ್ಲಿ ಚಾಲ್ರ್ಸ್ ಡಾರ್ವಿನ್ನನ ವಿಕಾಸವಾದ ಪ್ರಕಟಣೆಯಾದಾಗ, ತಾನು ಸಂಗ್ರಹಿಸಿದ ವಿವಿಧ ಪ್ರಭೇದಗಳ ತಲೆಬುರುಡೆಗಳನ್ನು ತುಲನಾತ್ಮಕವಾಗಿ ಅಧ್ಯಯನಮಾಡಿ, ಬೇರೆ ಬೇರೆ ಆಕಾರವನ್ನು ಹೊಂದಿದ್ದ ಎರಡು ಪ್ರಭೇದಗಳು ಪ್ರಾಗಿತಿಹಾಸದಲ್ಲಿ ಒಂದೇ ವಂಶಜರಿಂದ ಉದ್ಭವಿಸುವ ಸಾಧ್ಯತೆಗಳಿವೆ ಎಂದು ತೋರಿಸುವುದರೊಂದಿಗೆ ಡಾರ್ವಿನ್ನನ ವಾದವನ್ನು ಎತ್ತಿ ಹಿಡಿಯುವುದರಲ್ಲಿ ಯಶಸ್ವಿಯಾದ ಕೂಡ.  1861ರಲ್ಲಿ ಮಾನವ ಸಂಘದ ಸ್ಥಾಪನೆಮಾಡಿ ಆರ್ಕಿವ್ಸ್ ಫಾರ್ ಆಂತ್ರೊಪಾಲಜಿ ಎಂಬ ನಿಯತಕಾಲಿಕವನ್ನು ಪ್ರಕಟಿಸುವ ವ್ಯವಸ್ಥೆ ಮಾಡಿದ.  ರಷ್ಯದ ಭೂಗೋಳ ಹಾಗೂ ಕೀಟ ವಿಜ್ಞಾನಗಳ ಸಂಘಗಳನ್ನು ಸ್ಥಾಪಿಸಿ ಅವುಗಳ ಪ್ರಥಮ ಅಧ್ಯಕ್ಷನೂ ಆಗಿದ್ದ.  1861ರಲ್ಲಿ ವಿಜ್ಞಾನ ಅಕಾಡೆಮಿಯಿಂದ ನಿವೃತ್ತನಾದರೂ 1867ರ ತನಕ ಅಲ್ಲಯೇ ತನ್ನ ಸಂಶೋಧನೆಗಳನ್ನು ಮುಂದುವರಿಸಿದ.  ಎಸ್ಟೋನೀಯದ ದೋರ್‍ಪತ್ (ತಾರ್ತು) ಎಂಬಲ್ಲಿ 1876 ನವೆಂಬರ್ 28ರಂದು ಮರಣಹೊಂದಿದ.
(ಎಸ್.ಎನ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ